ಪ್ಲಿಷ್

	 ಸ್ವಿಟ್ಸರ್ಲೆಂಡಿನ ಆಲ್ಟ್ಸ್ ಪರ್ವತಪ್ರದೇಶದಲ್ಲಿ ಇಯೊಸೀನ್-ಅಲಿಗೊಸೀನ್  ಕಾಲಗಳಲ್ಲಿ ನಿಕ್ಷೇಪಗೊಂಡ ಬೂದು ಜೇಡುಶಿಲೆ ಮತ್ತು ಅದೇ ಬಣ್ಣದ ಮರಳುಶಿಲೆಗಳ ಪರಂಪರೆ. ಇದು ಅನೇಕ ಮೀಟರ್ ದಪ್ಪ ರೂಪುಗೊಂಡಿದ್ದರೂ ಪ್ರತಿ ಜೇಡುಶಿಲೆ ಅಥವಾ ಮರಳು ಶಿಲಾಪದರ ಕೇವಲ ಕೆಲವು ಸೆಂಟಿಮೀಟರುಗಳಿಂದ 50-60 ಸೆಂಮೀಗಳಷ್ಟು ಮಾತ್ರ ದಪ್ಪವಿದ್ದು ಅನೇಕ ಬಾರಿ ಪುನರಾವೃತ್ತಿಗೊಂಡಿದೆ. ಇಲ್ಲಿ ಜೀವ್ಯವಶೇಷಗಳು ಇರುವುದು ಅಪರೂಪ. ಇರುವ ಕೆಲವೇ ಅವಶೇಷಗಳು ಈ ಶಿಲೆಗಳು ಸಾಗರದಡಿ ನಿಕ್ಷೇಪಗೊಂಡಿವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಭೂವಿಜ್ಞಾನಿಗಳು ಇವು ಸಾಗರದಲ್ಲಿ ಸಾಕಷ್ಟು ಆಳವಿರುವ ಮತ್ತು ಹೆಚ್ಚು ಆಳ ಇರುವ ಕಡೆ ನಿಕ್ಷೇಪಗೊಂಡಿರಬೇಕೆಂದು ಅಭಿಪ್ರಾಯಪಡುತ್ತಾರೆ.

	ಪ್ಲಿಷ್ ಮಾದರಿ ಶಿಲೆಗಳು ಮೇಲೆ ತಿಳಿಸಿದ ಪ್ರದೇಶದಲ್ಲಿ ಮಾತ್ರವೇ ಅಲ್ಲದೆ ಪ್ರಪಂಚದ ನಾನಾ ಭಾಗಗಳಲ್ಲಿ ಭೂಕಾಲದ ಬೇರೆ ಬೇರೆ ಯುಗಗಳಲ್ಲಿ ನಿಕ್ಷೇಪಗೊಂಡಿವೆ. ಕೆನಡದ ಪೂರ್ವ ಕೇಂಬ್ರಿಯನ್ ಶಿಲಾ ಶ್ರೇಣಿಯಲ್ಲಿ ಈ ಮಾದರಿ ಶಿಲೆಗಳಿವೆ. ಪ್ರಾಚೀನ ಜೀವಿಕಲ್ಪದ ಪೂರ್ವಾರ್ಧ ಭಾಗದಲ್ಲಿದ್ದ ಬ್ರಿಟನ್ನಿನ ಕೆಲಡೋನಿಯನ್ ಸಾಗರ ಪ್ರದೇಶ. ಯೂರೋಪಿನ ಅರ್ಮೊರಿಕನ ಸಾಗರಪ್ರದೇಶ, ಆರ್ಡೊವಿಶಿಯನ್ ಮತ್ತು ಡೆವೋನಿಯನ್ ಕಾಲಗಳಲ್ಲಿಯ ಅಪಲೇಚಿಯನ್ ಪರ್ವತ ಪ್ರದೇಶ ಮತ್ತು ನವಜೀವಿಕಲ್ಪದ ಆದಿಭಾಗದಲ್ಲಿದ್ದ ಆಲ್ಟ್ಸ್, ಕಾಕಸಸ್ ಕಾರ್ಪೇತಿಯನ್ ಮತ್ತು ಹಿಮಾಲಯ ಪರ್ವತ ಪ್ರದೇಶಗಳ ಟೆತಿಸ್ ಸಾಗರದಲ್ಲಿ ಪ್ಲಿಷ್ ಮಾದರಿ ಶಿಲೆಗಳು ನಿಕ್ಷೇಪಗೊಂಡಿವೆ. ಆದ್ದರಿಂದ, ಈಗ ಪ್ಲಿಷ್ ಎಂಬ ಪದವನ್ನು ಕಾಲ ದೇಶಮಾನಗಳ ಮಿತಿಗೊಳಪಡಿಸದೆ, ಮಾದರಿ ಪ್ರದೇಶದ ಶಿಲೆಗಳನ್ನು ಹೋಲುವ ಶಿಲಾ ಪರಂಪರೆಗಳೆಲ್ಲೇ ನಿಕ್ಷೇಪಗೊಂಡಿರಲಿ ಯಾವ ಕಾಲದವೇ ಆಗಿರಲಿ ಅನ್ವಯಿಸಲಾಗುತ್ತಿದೆ.

	ಪ್ಲಿಷ್ ರೀತಿಯ ಭಾರತ ಉಪಖಂಡ ಕ್ರಿಟೇಷಿಯಸ್ ಕಾಲದಲ್ಲಿ ಅನೇಕ ಪ್ರದೇಶಗಳಲ್ಲಿ ನಿಕ್ಷೇಪಗೊಂಡಿವೆ. ಬಲೂಚಿಸ್ತಾನದ ಪಶ್ಚಿಮಭಾಗ, ಸ್ಪಿಟಿ, ಕುರ್ಮಾ, ಚೊಹರ್-ಹುಂಡೆಸ್ ಮುಂತಾದ ಪ್ರದೇಶಗಳಲ್ಲಿಯೂ ಬಮಾರಾ ಆರಕಾನ್ ಪ್ರದೇಶಗಳಲ್ಲಿಯೂ ನಿಕ್ಷೇಪಗೊಂಡಿವೆ. ಈ ಪ್ರದೇಶಗಳ ಕ್ರಿಟೇಷಿಯಸ್, ಯುಗದ ಶಿಲಾಶ್ರೇಣಿಯ ಕೆಳಭಾಗದ ಬಲು ಭಾಗ ಪ್ಲಿಷ್ ಶಿಲೆಗಳಂತೆಯೇ ಇದೆ. ಈ ಶಿಲೆಗಳೆಲ್ಲ ಶಿಲಾಸಂಯೋಜನೆಯಲ್ಲಿ ಯೂರೋಪಿನ ಆಲ್ಪ್ಸ್ ಪ್ರದೇಶದ ಪ್ಲಿಷ್ ಶಿಲೆಗಳನ್ನು ಹೋಲುತ್ತವೆ. ಸ್ಪಿಟಿ , ಕುಮಾನ್, ಜೊಹರ್-ಹುಂಡೆಸ್ ಪ್ರದೇಶಗಳ ಪ್ಲಿಷ್ ಶಿಲೆಗಳು ಜುರಾಸಿಕ್ ಯುಗದ ಸ್ಪಿಟಿ ಜೇಡುಶಿಲೆಗಳನ್ನೂ ಹೋಲುತ್ತವೆ. ಆದರೆ ಅವುಗಳಲ್ಲಿರುವ ಅಮ್ಮೊನೈಟ್ ಅವಶೇಷಗಳು ಮಾತ್ರ ಇಲ್ಲ. ಆದ್ದರಿಂದ ಭಾರತದ ಭೂವಿಜ್ಞಾನಿಗಳು ಟೆತಿಸ್ ಸಾಗರದ ಆಳ ಸ್ಪಿಟಿ ಜೇಡುಶಿಲೆಗಳ ನಿಕ್ಷೇಪ ಆದ ಬಳಿಕ ಕ್ರಮೇಣ ಕಡಿಮೆಯಾಗಿರಬೇಕೆಂದೂ ತತ್ಪರಿಣಾಮವಾಗಿ ಸಾಗರಜೀವಿಗಳಿಗೆ ವಾಸಿಸಲು ಅನಾನುಕೂಲ ವಾತಾವರಣ ಉಂಟಾಗಿರಬೇಕೆಂದೂ ಊಹಿಸುತ್ತಾರೆ. ಕೂಮಾನ್, ಜೊಹರ್-ಹುಂಡೆಸ್ ಪ್ರದೇಶಗಳಲ್ಲಿ ಪ್ಲಿಷ್ ಶಿಲೆಗಳ ಮೇಲ್ಪದರಗಳು ಜ್ವಾಲಾಮುಖಿಜ ಶಿಲೆ ಟುಪ್ ಎಂಬುದಾಗಿ ಫಾನ್‍ಕ್ರಾಪ್ಟ್ ನಿರ್ಧರಿಸಿರುವುದು ತಪ್ಪೆಂದೂ ಅವು ರೇಡಿಯೊಲೇರಿಯನ್ ಬೆಣಚು ಶಿಲೆಗಳೆಂದೂ ಹೀಮ್ ಮತ್ತು ಗನಸ್ಸೆರ್ ತಿಳಿಸಿರುತ್ತಾರೆ. ಆದ್ದರಿಂದ ಆ ಭಾಗಗಳಲ್ಲಿ ಸಾಗರ ತಾತ್ಕಾಲಿಕವಾಗಿ ಆಳವಾಗಿದ್ದಿರಬೇಕು.       
 (ಡಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ